ಕುಟ್ಟಿ ಕೃಷ್ಣನ್, ಪಿ ಸಿ

1915- ಮಲಯಾಳಿ ಕಥೆಗಾರ ಕಾದಂಬರಿಗಳನ್ನೂ ಕವಿತೆಗಳನ್ನೂ ಬರೆದಿದ್ದಾರೆ. ಇವರು ಪಾಲ್‍ಘಾಟ್ ಜಿಲ್ಲೆಯ ಪೊನ್ನಾನಿ ಗ್ರಾಮದ ಮಧ್ಯವರ್ಗದ ಕುಟುಂಬದಲ್ಲಿ ಜನಿಸಿದರು. ಗ್ರಾಮದ ಪ್ರೌಢಶಾಲೆಯಲ್ಲಿ ಓದು ಮುಗಿಸಿ ವಿವಿಧ ಸ್ಥಳಗಳಲ್ಲಿ ನಾನಾರೀತಿಯ ಕೆಲಸ ಮಾಡಿ ಅಮೂಲ್ಯ ಅನುಭವ ಗಳಿಸಿಕೊಂಡರು. ಈಚೆಗೆ ಭಾರತದ ಆಕಾಶವಾಣಿಯ ಕೊಪೀಕೋಡ್ ಕೇಂದ್ರದಲ್ಲಿ ಕಲಾವಿದರಾಗಿ ಸೇರಿ ಈಗ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಇವರ ಮೊದಲ ಒಲವು ಕವಿತೆಗಳತ್ತ. ಅನಂತರ ಸಣ್ಣ ಕಥೆಗಳಲ್ಲಿ ತಮ್ಮ ಪ್ರೌಢಿಮೆಯನ್ನು ತೋರಿದರು. ನೀರ್‍ಚಲುಗಳ್ (ನೀರ ದಾರಿಗಳು) ಎನ್ನುವ ಸಣ್ಣ ಕಥೆಯಿಂದ ಹಿಡಿದು ಇದುವರೆಗೆ ಇವರ ಸಣ್ಣ ಕಥೆಗಳು ಹದಿನೈದು ಸಂಪುಟಗಳಲ್ಲಿ ಬಂದಿವೆ. ಇವುಗಳಿಂದ ಇವರು ಜನಪ್ರಿಯರಾದರು. ವ್ಯಕ್ತಿಗಳ ಮನಹೊಕ್ಕು ನೋಡುವ ಚೈತನ್ಯ, ಹಾಸ್ಯ ಮತ್ತು ಪ್ರಾಸಬದ್ದ ಪದ್ಯಶೈಲಿಯ ಬರಹ ಇವರ ವೈಶಿಷ್ಟ್ಯ ಕವಿ ಹೃದಯವಿಲ್ಲದವರು ಉತ್ತಮ ಕಥೆ, ಕಾದಂಬರಿಗಳನ್ನು ಬರೆಯಲಾರರು ಎಂದು ಅವರ ಅಭಿಮತ. ಇವರ ಕಥೆಗಳಲ್ಲಿ ಗ್ರಾಮಕ್ಕೆ ಸಂಬಂಧಪಟ್ಟ ವಸ್ತುವಿಷಯಗಳೇ ಹೆಚ್ಚು.

ಇವರ ಮೊದಲ ಮತ್ತು ಅತ್ಯುತ್ತಮ ಕಾದಂಬರಿ ಉಮ್ಮಚು (1954) ಪ್ರೀತಿ, ಅಪರಾಧ ಮತ್ತು ದಂಡನೆಗಳಿಂದ ಕೂಡಿದ ಕಥೆಯಿದು.

ಅನಂತರ ಸುಂದರನ್ ಮಾರುಮ್ ಮತ್ತು ಸುಂದರಿಹಳುಮ್ ಎಂಬ ಕಾದಂಬರಿ 1958ರಲ್ಲಿ ಬಂತು. ಇದರಲ್ಲಿ ಕಥೆ ಗ್ರಾಮದಿಂದ ಪಟ್ಟಣ ಮತ್ತು ಪಟ್ಟಣದಿಂದ ಗ್ರಾಮಕ್ಕೆ ಓಡಾಡುತ್ತದೆ. ಇದು ಉಮ್ಮಚುಗಿಂತಲೂ ಹೆಚ್ಚು ವೈವಿಧ್ಯದಿಂದ ಕೂಡಿದೆ. ಇವರು ಇನ್ನೂ ಮೂರು ಕಾದಂಬರಿಗಳನ್ನು ರಚಿಸಿದ್ದಾರೆ. 1959-60ರಲ್ಲಿ ಸುಂದರನ್ ಮಾರುಮ್ ಮತ್ತು ಸುಂದರಿಹಕುಳುಮ್ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂತು. ಇವರು ಕೆಲವು ನಾಟಕಗಳನ್ನೂ ಬರೆದಿದ್ದಾರೆ.

ಕೃಷ್ಣನ್ ನಾಸ್ತಿಕರೂ ಅಲ್ಲ. ಯೋಗಿಗಳೂ ಅಲ್ಲ. ಇವರೊಬ್ಬ ಆಶಾವಾದಿ, ವಾಸ್ತವಿಕತೆಗೆ ಹೆಚ್ಚು ಬೆಲೆ ಕೊಡುತ್ತಾರೆ-ಎಂದು ಇವರನ್ನು ತಿಳಿದವರು ಹೇಳುತ್ತಾರೆ. ಮನುಷ್ಯನಲ್ಲಿ ಇವರಿಗಿರುವ ಆಸ್ಥೆ ಅಪಾರ. ಇವರ ಕೃತಿಗಳಲ್ಲಿ ರಾಕ್ಷಸಪಾತ್ರಗಳೇ ಇಲ್ಲ.

 

(ಸಿ.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ